ಭಾರೀ ಮಳೆಗೆ ಉಡುಪಿ ತತ್ತರ – ಉಕ್ಕಿ ಹರಿದ ಇಂದ್ರಾಣಿ ತೀರ್ಥ, 150ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

ಉಡುಪಿ: ಮುಂಗಾರು ಮಳೆ ಉಡುಪಿ ನಗರದ ಹಲವೆಡೆ ನೆರೆ ಸೃಷ್ಟಿಸಿದೆ. ಇಂದ್ರಾಣಿ ತೀರ್ಥ ಉಕ್ಕಿ ಹರಿದ ಪರಿಣಾಮ ನದಿ ಪಾತ್ರದ ಸ್ಥಳಗಳೆಲ್ಲ ಜಲಾವೃತಗೊಂಡಿದೆ.

ಸುಮಾರು ಮೂರು ಗಂಟೆ ಸುರಿದ ರಣ ಮಳೆಗೆ ಉಡುಪಿ ನಗರ ತತ್ತರವಾಗಿದೆ. ಮಣಿಪಾಲ ಪರ್ಕಳ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಭಾರೀ ಪ್ರಮಾಣದಲ್ಲಿ ಉಡುಪಿಯತ್ತ ನೀರು ಹರಿದು ಬಂದಿದೆ. ಗದ್ದೆ, ನಗರ ಪ್ರದೇಶ, ಲೇಔಟ್‌ ಒಳಗಡೆ ಕೆಸರು ನೀರು ನುಗ್ಗಿದೆ.

ಗುಂಡಿಬೈಲು, ಪಾಡಿಗಾರು, ಮಠದಬೆಟ್ಟು, ಕರಂಬಳ್ಳಿ, ಕಲ್ಸಂಕ ಬೈಲಕೆರೆ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಮೂಡನಿಡಂಬೂರು, ನಿಟ್ಟೂರು, ಮಲ್ಪೆ, ಮಣಿಪಾಲ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, 150ಕ್ಕೂ ಅಧಿಕ ಮನೆಗಳು ಜಲ ದಿಗ್ಭಂಧನಕ್ಕೆ ಒಳಗಾಗಿವೆ. ಕೆಲ ಕಡೆ ಅಂಗಡಿಗಳ ಒಳಗಡೆ ನೀರು ನುಗ್ಗಿದೆ.

ಇಂದ್ರಾಣಿ ತೀರ್ಥ ಹರಿಯುವಲ್ಲೆಲ್ಲಾ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆ ಬಿದ್ದಾಗ ಎಲ್ಲಾ ಕಾಲುವೆಗಳು ತುಂಬಿಕೊಂಡಿರುವುದೇ ಈ ಸಮಸ್ಯೆಗೆ ಕಾರಣ. ಒಳಚರಂಡಿ ಅವ್ಯವಸ್ಥೆಯ ಬಗ್ಗೆ ನೆರೆಪೀಡಿತ ಪ್ರದೇಶದ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಗ್ನಿಶಾಮಕ ದಳದ ಬೋಟ್ ನಲ್ಲಿ ಜನರನ್ನು ರಕ್ಷಣೆ ಮಾಡಲಾಗಿದೆ. ಮಹಿಳೆಯರು ಮಕ್ಕಳನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ನಗರಸಭೆ, ಅಗ್ನಿಶಾಮಕದಳ, ಪೊಲೀಸರು ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಬೆಳಗ್ಗೆ ಸುರಿದ ಮಳೆಗೆ ಕರಾವಳಿ ಅಂಡರ್ ಪಾಸ್ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಾರೀ ಪ್ರಮಾಣದ ಮಳೆ ನೀರು ತುಂಬಿಕೊಂಡು ವಾಹನ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನ ಕಾರು ಬಸ್ಸುಗಳು ಕೃತಕ ನೆರೆ ನೀರಿನಲ್ಲಿ ಓಡಾಟ ಮಾಡುತ್ತಿದೆ.

Scroll to Top