Saturday, June 15, 2024
Homeಸುದ್ದಿಕರಾವಳಿಪ್ರಭೋ! ಆತನಿಗೆ ಓದುಬರಹ ಬರೋಲ್ಲ, SSLC ಯಲ್ಲಿ 623 ಅಂಕ, ಕೋರ್ಟ್ನಲ್ಲಿ ಕೆಲಸ, FIR ಹಾಕಲು...

ಪ್ರಭೋ! ಆತನಿಗೆ ಓದುಬರಹ ಬರೋಲ್ಲ, SSLC ಯಲ್ಲಿ 623 ಅಂಕ, ಕೋರ್ಟ್ನಲ್ಲಿ ಕೆಲಸ, FIR ಹಾಕಲು ಸೂಚಿಸಿದ ಜಡ್ಜ್

ಕಷ್ಟಪಟ್ಟು ಪ್ರತಿನಿತ್ಯ ಅನೇಕ ಗಂಟೆಗಳ ಕಾಲ ಓದಿದ್ರು ಕೂಡಾ ಅನೇಕರು ಎಸ್.ಎಸ್.ಎಲ್.ಸಿ,, ಪಿಯುಸಿಯಲ್ಲಿ ಪಾಸಾಗಲು ಪರದಾಡುತ್ತಾರೆ. ಅದರಲ್ಲೂ ಹೆಚ್ಚಿನ ಮಾರ್ಕ್ಸ್ ಪಡೆಯಬೇಕಾದ್ರೆ ಆ ವಿದ್ಯಾರ್ಥಿಗಳು ಪಟ್ಟಿರುವ ಕಷ್ಟ ಅಷ್ಟಿಷ್ಟಿರಲ್ಲಾ. ಆದ್ರೆ ಇಲ್ಲೋರ್ವ ವ್ಯಕ್ತಿಗೆ ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 623 ಅಂಕಗಳು ಬಂದಿವೆ. ಆದ್ರೆ ಅಚ್ಚರಿ ಅಂದ್ರೆ ಆತನಿಗೆ ಕನ್ನಡ, ಇಂಗ್ಲಿಷ್, ಹಿಂದಿ ಯಾವುದೇ ಭಾಷೆಯನ್ನು ಓದಲು ಬರೋದಿಲ್ಲವಂತೆ. ಬರೆಯಲು ಕೂಡಾ ಬರೋದಿಲ್ಲವಂತೆ. ಆದ್ರು ಆತ ಹೇಗೆ ಅಷ್ಟೊಂದು ಅಂಕ ಪಡೆದ ಅನ್ನೋದು ಸ್ವತ ಜಡ್ಜ್ ಗೆ ಕೂಡಾ ಅಚ್ಚರಿ ತರಿಸಿದೆ. ಹೀಗಾಗಿ ಈ ಅಂಕಗಳ ಹಿಂದಿನ ನಿಗೂಢತೆಯನ್ನು ಪತ್ತೆ ಮಾಡಲು ಸ್ವತ: ನ್ಯಾಯಾಧೀಶರೇ ಖಾಸಗಿ ದೂರು ನೀಡಿದ್ದಾರೆ.

ಪ್ರಕರಣದ ವೃತ್ತಾಂತ ಹೀಗಿದೆ :

ಕೊಪ್ಪಳ ನಗರದ ಜೆಎಂಎಫ್.ಸಿ ನ್ಯಾಯಾಲಯದಲ್ಲಿ ಕಳೆದ ಕೆಲ ವರ್ಷಗಳಿಂದ ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕು ಮೂಲದ ಪ್ರಭು ಲೋಕರೆ ಅನ್ನೋ 23 ವರ್ಷದ ಯುವಕ ಸ್ಕ್ಯಾವೆಂಜರ್ ಅಂದ್ರೆ ಸ್ವಚ್ಚತಾ ಕೆಲಸ ಮಾಡುತ್ತಿದ್ದ. ಏಳನೇ ತರಗತಿವರೆಗೆ ಓದಿದ್ದ ಪ್ರಭು, ನಂತರ ಮುಂದೆ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ಶಾಲೆ ಬಿಟ್ಟು ಕೋರ್ಟ್ ನಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ. ಆದ್ರೆ ಇದೇ ಪ್ರಭು ಯಾದಗಿರಿಯಲ್ಲಿರುವ ಜಿಲ್ಲಾ ಮತ್ತ ಸತ್ರ ನ್ಯಾಯಾಲಯದಲ್ಲಿ ಜವಾನ ಹುದ್ದೆಗೆ ಆಯ್ಕೆಯಾಗಿದ್ದಾನೆ. 2024ರ ಎಪ್ರಿಲ್ 22 ರಂದು ಜವಾನ ಹುದ್ದೆಯ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆ ಆಯ್ಕೆ ಪಟ್ಟಿಯಲ್ಲಿ ಪ್ರಭು ಲೋಕರೆ ಹೆಸರು ಕೂಡಾ ಇದೆ.

ಜವಾನ ಹುದ್ದೆಗೆ ಆಯ್ಕೆಯಾಗಬೇಕಾದ್ರೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು. ಜೊತೆಗೆ ಹೆಚ್ಚಿನ ಅಂಕ ಪಡೆದವರಿಗೆ ಜವಾನ ಹುದ್ದೆ ಸಿಗುತ್ತದೆ. ಆದ್ರೆ ಪ್ರಭು ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಲ್ಲಿ ಜವಾನ ಆಗಿ ಆಯ್ಕೆಯಾಗಿದ್ದು, ಕೊಪ್ಪಳ ಜೆಎಂಎಫ್ ಸಿ ನ್ಯಾಯಾಧೀಶರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾಕಂದ್ರೆ ಕಳೆದ ಕೆಲ ವರ್ಷಗಳಿಂದ ಕೊಪ್ಪಳ ನ್ಯಾಯಾಲಯದಲ್ಲಿ ಪ್ರಭುವನ್ನು ನೋಡಿದ್ದರು. ಆತ ಎಂದಿಗೂ ಶಾಲೆಗೆ ಹೋಗಿದನ್ನು ಯಾರು ನೋಡಿರಲಿಲ್ಲಾ. ಜೊತೆಗೆ ಆತನಿಗೆ ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಓದಲು, ಬರೆಯಲು ಕೂಡಾ ಬರೋದಿಲ್ಲಾ ಅನ್ನೋದನ್ನು ಅನೇಕ ಬಲ್ಲ ಮಾಹಿತಿಗಳ ಮೂಲಕ ತಿಳಿದುಕೊಂಡಿದ್ದರು. ಆದ್ರೆ ಇಂತಹ ವ್ಯಕ್ತಿ ಜವಾನ ಆಗಿ ಆಯ್ಕೆಯಾಗಿದ್ದು ಸ್ವತ ಜಡ್ಜ್ ಅವರಿಗೆ ಅಚ್ಚರಿಗೆ ಕಾರಣವಾಗಿತ್ತು.

ಹೀಗಾಗಿ ಸ್ವತ ಕೊಪ್ಪಳ ಜೆಎಂಎಫ್ ಸಿ ನ್ಯಾಯಾಧೀಶರು, ಯಾದಗಿರಿ ಕೋರ್ಟ್ ನಲ್ಲಿ ಜವಾನ ಆಗಿ ಆಯ್ಕೆಯಾಗಿದ್ದ ಪ್ರಭು ಲೋಕರೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಆತ ಹುದ್ದೆ ಪಡೆಯಲು ಲಗತ್ತಿಸಿದ್ದ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಪರಿಶೀಲಿಸಿದ್ದರು. ಪರಿಶೀಲನೆ ನಡೆಸಿದಾಗ ಪ್ರಭು 625ಕ್ಕೆ ಬರೋಬ್ಬರಿ 623 ಅಂಕ ಪಡೆದಿದ್ದ. ಇದನ್ನು ನೋಡಿ ಜಡ್ಜ್ ಶಾಕ್ ಆಗಿದ್ದರು.

ಕನ್ನಡವನ್ನು ಕೂಡಾ ಸ್ಪಷ್ಟವಾಗಿ ಓದಲು, ಬರೆಯಲು ಬಾರದ ಯುವಕ ಇಷ್ಟೊಂದು ಅಂಕ ಪಡೆದಿದ್ದು ಹೇಗೆ ಅನ್ನೋದು ಸ್ವತ ಜಡ್ಜ್ ಅವರಿಗೆ ಕೂಡಾ ಅಚ್ಚರಿಯಾಗಿತ್ತು. ಹೀಗಾಗಿ ಇದರಲ್ಲಿ ಏನೋ ಅಕ್ರಮ ನಡೆದಿದೆ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ ಅನ್ನೋದನ್ನು ಅರಿತ ಜಡ್ಜ್ ಅವರು ಕೊಪ್ಪಳ ನಗರ ಠಾಣೆಗೆ ಖಾಸಗಿ ದೂರನ್ನು ನೀಡಿದ್ದಾರೆ. ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚಿನ ಅಂಕ ಪಡೆಯಲು ಈತನ ಜೊತೆ ಇನ್ನೂ ಕೆಲ ಮಂದಿ ಶಾಮೀಲಾಗಿರಬಹುದು. ಈ ಬಗ್ಗೆ ವಿವರವಾದ ತನಿಖೆ ನಡೆಸಬೇಕು. ಸರ್ಕಾರಿ ಉದ್ಯೋಗವನ್ನು ಅಕ್ರಮವಾಗಿ ಪಡೆಯಲು ಇಂತಹದೊಂದು ವಂಚನೆ ಎಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಭು ಲೋಕರೆ ವಿರುದ್ದ 2024 ರ ಎಪ್ರಿಲ್ 26 ರಂದು ಕೊಪ್ಪಳ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಕೊಪ್ಪಳ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂಕಪಟ್ಟಿ ಅಸಲಿ ಇದೆಯಾ, ನಕಲಿ ಇದೆಯಾ ಅನ್ನೋದು ಸೇರಿದಂತೆ ಬೋರ್ಡ್ ನಿಂದ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ದೆಹಲಿ ಬೋರ್ಡ್ ನಿಂದ ಅಂಕಪಟ್ಟಿ ಪಡೆದಿರೋ ಪ್ರಭು ಲೋಕರೆ

ಈ ಬಗ್ಗೆ ಮಾಹಿತಿ ನೀಡಿರುವ ಪ್ರಭು, ತಾನು 2017-18 ರಲ್ಲಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿರುವ ಖಾಸಗಿ ಸಂಸ್ಥೆಯೊಂದರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದೆ. ದೆಹಲಿ ಎಜುಕೇಷನ್ ಬೋರ್ಡ್ ನಡೆಸಿರುವ ಪರೀಕ್ಷೆ ಅದು. ಆ ಪರೀಕ್ಷೆಗೆ ಹಾಜರಾಗಿ ನಾನು ಪಾಸಾಗಿದ್ದೇನೆ. ನಾನು ಪಡೆದಿರೋದು ಕರ್ನಾಟಕ ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆಯ ಅಂಕ ಪಟ್ಟಿಯಲ್ಲ ಅಂತ ಹೇಳಿದ್ದಾನೆ. ಜೊತೆಗೆ ನಾನೊಬ್ಬನೆ ಈ ರೀತಿಯಾಗಿ ಆಯ್ಕೆಯಾಗಿಲ್ಲ. ರಾಜ್ಯದಲ್ಲಿರುವ ಇನ್ನೂ ಅನೇಕ ನ್ಯಾಯಾಲಯಗಳಲ್ಲಿ ಇನ್ನೂ ಅನೇಕ ಮಂದಿ ಜವಾನ ಹುದ್ದೆಗೆ ಆಯ್ಕೆಯಾಗಿದ್ದಾರೆ ಅಂತಿದ್ದಾನೆ ಪ್ರಭು.

ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ನಡೆಯುತ್ತಿದೆಯಾ ಕಳ್ಳದಂಧೆ?

ಪ್ರಭು ಲೋಕರೆ ಎಂಬ ಯುವಕ ಅಕ್ರಮ ಮತ್ತು ವಂಚನೆ ಮೂಲಕ ಸ್ವತಃ ನ್ಯಾಯಾಲಯದಲ್ಲಿಯೇ ಉದ್ಯೋಗ ಗಿಟ್ಟಿಸಿರುವುದು ಆಶ್ಚರ್ಯ ಮತ್ತು ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ. ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ನಡೆಯುತ್ತಿದೆಯಾ ಕಳ್ಳದಂಧೆ ಎಂಬ ಅನುಮಾನವನ್ನೂ ಮೂಡಿಸಿದೆ. ಪ್ರಭು ಲೋಕರೆ ಪ್ರಕರಣ ಇಂದೊಂದೆ ಇರಬಹುದು ಎಂದು ಬಗೆಯುವುದು ತಪ್ಪಾದೀತು. ಏಕೆಂದರೆ ಸ್ವತಃ ಪ್ರಭು ಲೋಕರೆ ಈ ಬಗ್ಗೆ ಅನುಮಾನದ ಬೀಜ ಬಿತ್ತಿದ್ದು, ತನ್ನಂತೆ ಇನ್ನೂ ಅನೇಕ ಮಂದಿ ರಾಜ್ಯದ ನಾನಾ ಕೋರ್ಟ್ಗಳಲ್ಲಿ ಇದೇ ರೀತಿ ನೇಮಕಗೊಂಡಿದ್ದಾರೆ ಎಂದು ತಿಳಿಸಿರುವುದು ಆಶ್ಚರ್ಯ ತಂದಿದೆ.

ಎಸ್ ಎಸ್ ಎಲ್ ಸಿ ಮೇಲೆ ಸಿಗೋ ನೌಕರಿ ಪಡೆಯಲು ಅಭ್ಯರ್ಥಿಗಳು ವಾಮಮಾರ್ಗ ತುಳಿದಿದ್ದಾರೆ. ರಾಜ್ಯದ ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆ ಬಿಟ್ಟು, ಬೇರೆ ರಾಜ್ಯದ ಬಾಹ್ಯ ಪರೀಕ್ಷೆ ನಡೆಸೋ ಸಂಸ್ಥೆಗಳ ಪರೀಕ್ಷೆಗೆ ಹಾಜರಾಗಿ ಅಂಕಪಟ್ಟಿ ಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಣ ಕೊಟ್ಟವರಿಗೆ ಒಂದೆಡೆ ಕೂರಿಸಿ ಪರೀಕ್ಷೆ ಬರೆಸಿ ಹೆಚ್ಚಿನ ಅಂಕ ನೀಡೋ ಸಂಸ್ಥೆಗಳು ರಾಜ್ಯದಲ್ಲಿ ಸಕ್ರಿಯವಾಗಿರುವ ಬಗ್ಗೆ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಿದರೆ ದೊಡ್ಡ ಮಟ್ಟದ ಅಕ್ರಮಜಾಲ ಬಯಲಾಗುವ ಸಾಧ್ಯತೆಯಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News