ಕಾಪು: ಎರಡು ವರ್ಷಕ್ಕೊಮ್ಮೆ ಮಹತ್ವಪೂರ್ಣವಾಗಿ ನಡೆಯುವ ಪಿಲಿಕೋಲಕ್ಕೆ ಚಾಲನೆ

ಕಾಪು: ಎರಡು ವರ್ಷಕ್ಕೊಮ್ಮೆ ಮಹತ್ವಪೂರ್ಣವಾಗಿ ನಡೆಯುವ ಕಾಪುವಿನ ಪಿಲಿಕೋಲಕ್ಕೆ ನಿನ್ನೆ ಕಾಪುವಿನ ಹಳೆ ಮಾರಿಯಮ್ಮ ದೇವಸ್ಥಾನದ ಸಮೀಪದ ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಚಾಲನೆ ನೀಡಲಾಯಿತು.


ಹತ್ತಿರದ ಕೆರೆಯಲ್ಲಿ ಪಿಲಿದೈವ ನರ್ತಕ ಸ್ನಾನಾದಿ ಕಾರ್ಯ ಮುಗಿಸಿ ಬಳಿಕ ದೈವಸ್ಥಾನದ ಮುಂಭಾಗದಲ್ಲಿ ತೆಂಗಿನ ಗರಿಗಳಿಂದ ತಯಾರಿಸಲಾದ ಸಿರಿಯಿಂದ ಮಾಡಿದ ಗುಂಡದೊಳಗೆ ಹುಲಿವೇಷದ ಬಣ್ಣಗಾರಿಕೆ ನಡೆಯುತ್ತದೆ. ಈ ವೇಳೆ ಗುಂಡದೊಳಗೆ ಹಾಗೂ ಸುತ್ತಮುತ್ತ ಯಾರೂ ಪ್ರವೇಶ ಮಾಡುವಂತಿಲ್ಲ. ಹುಲಿವೇಷದ ಬಣ್ಣಗಾರಿಕೆಯೊಂದಿಗೆ ವಿಚಿತ್ರವಾಗಿ ಹುಲಿಯಂತೆ ಆರ್ಭಟಿಸುತ್ತ ಒಲಿಗುಂಡದಿಂದ ವೇಷಧಾರಿ ವೈಭವದಿಂದ ಹೊರಬರುವ ಮೂಲಕ ಪಿಲಿಕೋಲಕ್ಕೆ ಚಾಲನೆ ದೊರೆಯುತ್ತದೆ.


ಹುಲಿ ಬೇಟೆಯ ಜೊತೆಗೆ ಗ್ರಾಮ ಸಂಚಾರಕ್ಕೆ ಹೊರಟು ಹಳೆ ಮಾರಿಗುಡಿ ಮುಂಭಾಗದ ಬಾಳೆಯ ಗರುಡ- ಗಂಬವನ್ನು ಮುರಿಯುವ ಹುಲಿ ವೇಷಧಾರಿ, ಜೀವಂತ ಕೋಳಿಯ ರಕ್ತ ಹೀರುವ ಸನ್ನಿವೇಶ ಮೈ ಜುಮ್ಮೆನಿಸುತ್ತದೆ. ಈ ಸಮಯದಲ್ಲಿ ಹುಲಿಯ ಅರ್ಭಟ, ಹಾರಾಟ ಮೈನವಿರೇಳಿಸುತ್ತದೆ.

ಅನಾದಿ ಕಾಲದಿಂದ ಬಂದ ಈ ವಿಶಿಷ್ಟ ಆಚರಣೆ ವೀಕ್ಷಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ತುಳುವರು ಬರುತ್ತಾರೆ. ಕಾರಣಿಕ ಹಾಗೂ ದೈವಿಕ ಹಿನ್ನೆಲೆ ಹೊಂದಿರುವ ಪಿಲಿಭೂತ ಕೋಲದಲ್ಲಿ ಹುಲಿ ಮುಟ್ಟಿದರೆ ಮರಣ ಭೀತಿಯ ನಂಬಿಕೆ ಇರುವುದರಿಂದ ಪಿಲಿಕೋಲವನ್ನು ಸಾಕಷ್ಟು ದೂರದಲ್ಲಿ ನಿಂತು ಜನರು ವೀಕ್ಷಿಸುತ್ತಾರೆ. ಇತರ ದೈವಗಳ ಕೋಲಗಳಂತೆ ಹತ್ತಿರದಿಂದ ಹುಲಿಕೋಲವನ್ನು ವೀಕ್ಷಿಸಲಾಗುವುದಿಲ್ಲ.

ದೈವಕ್ಕೆ ಕೋಳಿ ಮತ್ತು ಹಾಲನ್ನು ಹರಕೆಯಾಗಿ ಭಕ್ತರು ಸಮರ್ಪಿಸುತ್ತಾರೆ. ಕಾಪು ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಈ ಅವಧಿಯಲ್ಲಿ ಪಿಲಿಕೋಲ ಮಾತ್ರವಲ್ಲದೆ ಮುಗ್ಗೇರ್ಕಳ, ತನ್ನಿಮಾನಿಗ, ಬಬ್ಬರ್ಯ, ಗುಳಿಗ ಹಾಗೂ ಪರಿವಾರ ದೈವಗಳ ನೇಮೋತ್ಸವವೂ ನಡೆಯುತ್ತದೆ. ಆದರೆ, ಕೊನೆಯಲ್ಲಿ ನಡೆಯುವ ಪಿಲಿಕೋಲವನ್ನು ನೋಡಲು ಜನಸಾಗರವೇ ಹರಿದು ಬರುವುದು ವಿಶೇಷ.

ಕಾಪು ಪಿಲಿಭೂತದ ಹಿನ್ನೆಲೆ

ಕಾಪು ಸೀಮೆ ಆಳುತ್ತಿದ್ದ ಭೈರರಸು ಅರಮನೆಯ ಪಂಜರದಲ್ಲಿ ಹುಲಿ ಸಾಕುತ್ತಿದ್ದರು ಎಂಬ ಪ್ರತೀತಿ ಇದೆ. ಕಾಲಕ್ರಮೇಣ ಹುಲಿ ಸಾಕಲು ಕಷ್ಟವಾದಾಗ ಸೀಮೆ ಪೊರೆಯುವ ಮಾರಿಯಮ್ಮನ ಅನುಮತಿ ಕೇಳಿ ಹುಲಿಯನ್ನು ಕಾಡಿಗೆ ಬಿಡುವ ಆಲೋಚನೆ ಮಾಡಿದರು. ನಂತರ ರಾತ್ರಿ ರಾಜನ ಕನಸಲ್ಲಿ ಬಂದ ಮಾರಿಯಮ್ಮ ಹುಲಿ ದೈವಾಂಶ ಸಂಭೂತವಾಗಿದ್ದು, ದೇವಸ್ಥಾನದ ಬಲಭಾಗದಲ್ಲಿರುವ ಸ್ಥಳದಲ್ಲಿ ಹುಲಿಗಳಿಗೊಂದು ಆಲಯ ಕಟ್ಟಿಸಿ ಆರಾಧಿಸಲು ಸೂಚಿಸುತ್ತಾಳೆ. ಅದರಂತೆ ಪಿಲಿಭೂತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ಪೌರಾಣಿಕ ಹಿನ್ನೆಲೆ.

ಹುಲಿ ವೇಷಧಾರಿಯನ್ನು ಹಗ್ಗಹಾಕಿ ನಿಯಂತ್ರಿಸಿದರೂ ಜನನಿಬಿಡ ಪ್ರದೇಶಕ್ಕೆ ಚಂಗನೆ ಹಾರುವ, ಅಟ್ಟಿಸಿಕೊಂಡು ಹೋಗುವಾಗ ಸಾರ್ವಜನಿಕರು ಚೆಲ್ಲಾಪಿಲ್ಲಿಯಾಗಿ ಓಡುವ ದೃಶ್ಯ ಮೈನವಿರೇಳುತ್ತದೆ. ಸಂಜೆ ವೇಳೆಗೆ ಹುಲಿ ದೈವಸ್ಥಾನಕ್ಕೆ ವಾಪಸ್ಸಾಗುವ ಮೂಲಕ ಪಿಲಿಕೋಲಕ್ಕೆ ತೆರೆಬೀಳುತ್ತದೆ.

You cannot copy content from Baravanige News

Scroll to Top