Tuesday, May 21, 2024
Homeಸುದ್ದಿಕರಾವಳಿಉಡುಪಿಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ : ನಗರಸಭೆಯಿಂದ ಮಹತ್ವದ ನಿರ್ಧಾರ

ಉಡುಪಿಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ : ನಗರಸಭೆಯಿಂದ ಮಹತ್ವದ ನಿರ್ಧಾರ

ಉಡುಪಿ : ಕರಾವಳಿಯ ಜಿಲ್ಲೆ ಉಡುಪಿಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿಯೇ ಕುಡಿಯುವ ನೀರಿನ ವಿಚಾರದಲ್ಲಿ ಸಂಕಷ್ಟ ಅನುಭವಿಸಿದ್ದ ಉಡುಪಿಯ ಜಿಲ್ಲೆಯ ನಾಗರಿಕರು, ಈ ಬಾರಿ ಮತ್ತೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಉಡುಪಿಯ ನಗರಸಭೆ ಇದ್ದಷ್ಟು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಉಡುಪಿ ನಗರಕ್ಕೆ ನೀರು ಪೂರೈಸುವ ಹಿರಿಯಡ್ಕ ಸಮೀಪದ ಬಜೆ ಡ್ಯಾಮ್ನಲ್ಲಿ ಈಗಾಗಲೇ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಹೀಗಾಗಿ ಇರುವ ಅಲ್ಪ ಸ್ವಲ್ಪ ನೀರನ್ನು ಸಮ ಪ್ರಮಾಣದಲ್ಲಿ ಬಳಸಲು ಆಲೋಚನೆ ಮಾಡಿ, ರೇಷನ್ ಪದ್ಧತಿಯನ್ನು ಮತ್ತೆ ಜಾರಿಗೆ ತರುವ ನಿರ್ಧಾರಕ್ಕೆ ನಗರ ಸಭೆ ಅಣಿಯಾಗುತ್ತಿದೆ.

ಸದ್ಯ ಬಜೆ ಡ್ಯಾಮ್ನಲ್ಲಿರುವ ನೀರಿನ ಪ್ರಮಾಣ ಮೇ 15 ರವರೆಗೆ ಮಾತ್ರ ಬಳಕೆಗೆ ಲಭ್ಯವಾಗಲಿದೆ. ಮಾರ್ಚ್ ತಿಂಗಳಿನ ಪ್ರಾರಂಭದಲ್ಲಿ 5.96 ಮೀಟರ್ ನೀರಿನ ಸಂಗ್ರಹವಿದ್ದ ಡ್ಯಾಮ್ನಲ್ಲಿ ಈಗ 3.61 ಮೀಟರ್ ನೀರಿನ ಮಟ್ಟವಿದೆ. ಹೀಗಾಗಿ ಯಥೇಚ್ಛವಾಗಿ ನೀರನ್ನ ನಗರಸಭೆ ವ್ಯಾಪ್ತಿಯ ನಾಗರಿಕರು ಬಳಸಿದಲ್ಲಿ ಮೇ ತಿಂಗಳಿನ ಅಂತ್ಯದ ಒಳಗೆ ಡ್ಯಾಮ್ನ ನೀರು ಸಂಪೂರ್ಣ ಬರಿದಾಗುವ ಸಾಧ್ಯತೆ ಇದೆ. ಹೀಗಾಗಿ ಜೂನ್ ಮೊದಲ ವಾರದವರೆಗೆ ಕುಡಿಯುವ ನೀರನ್ನು ಪೋಲಾಗದಂತೆ ಸಮರ್ಪಕವಾಗಿ ಬಳಸಿಕೊಳ್ಳುವ ಅನಿವಾರ್ಯತೆ ನಗರಸಭೆಗಿದೆ.

ಕಳೆದ ಬಾರಿಯಂತೆ ನಗರಸಭೆ ವ್ಯಾಪ್ತಿಯ ಮಲ್ಪೆ, ಮಣಿಪಾಲ, ಉಡುಪಿ ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಿ ಎರಡು ದಿನಕ್ಕೊಮ್ಮೆ ರೇಷನಿಂಗ್ ಪದ್ಧತಿಯಲ್ಲಿ ನೀರು ಬಿಡುವ ಆಲೋಚನೆ ಸದ್ಯ ನಗರಸಭೆ ಮಾಡುತ್ತಿದೆ. ಇನ್ನು ನಗರಸಭಾ ವ್ಯಾಪ್ತಿಯ ಎತ್ತರದ ಪ್ರದೇಶಗಳಲ್ಲಿ ಎರಡು ದಿನಗಳ ಬದಲಿಗೆ ಮೂರು ದಿನಗಳಿಗೊಮ್ಮೆಯಾದರೂ ಕುಡಿಯುವ ನೀರನ್ನು ಸರಬರಾಜು ಮಾಡಲು ನಗರಸಭೆ ಪ್ರಯತ್ನಿಸುತ್ತಿದೆ. ಒಟ್ಟಾರೆಯಾಗಿ ಈ ಬಾರಿ ಮಳೆರಾಯ ಕಳೆದ ಬಾರಿಯಂತೆ ಒಂದು ತಿಂಗಳು ಮುಂದೆ ಹೋದರೆ, ಕರಾವಳಿಯ ಬಿಸಿಲಿನ ಬೇಗೆಯ ನಡುವೆ ಕುಡಿಯಲು ನೀರು ಇಲ್ಲದೆ ಸಂಕಷ್ಟ ಪಡುವ ದಿನಗಳು ಎದುರಾಗಲಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಎಚ್ಚೆತ್ತು ಕುಡಿಯುವ ನೀರಿನ ಸಮರ್ಪಕ ಬಳಕೆಯ ಕುರಿತು ಕಾರ್ಯೋನ್ಮುಖರಾಗಬೇಕಾದ ಅಗತ್ಯತೆ ಇದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News