ನವದೆಹಲಿ : ಜಾಹೀರಾತು ನೀಡಿದ ಗಾತ್ರದಲ್ಲೇ ಪತಂಜಲಿ ಸಂಸ್ಥೆ ಪತ್ರಿಕೆಯಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಇಂದು ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ. ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಯೋಗ ಗುರು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆದಿದೆ. ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಪತಂಜಲಿ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಕೇಂದ್ರ ಸರ್ಕಾರವನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ.
ಬಾಬಾ ರಾಮ್‌ದೇವ್ ಪರ ವಾದ ಮಂಡಿಸಿದ ವಕೀಲರು, ಪತ್ರಿಕೆಗಳಲ್ಲಿ ಕ್ಷಮಾಪಣೆ ಪ್ರಕಟವಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ಸೋಮವಾರ ಯಾಕೆ ಕ್ಷಮಾಪಣೆ ಪ್ರಕಟವಾಗಿದೆ ಎಂದು ಪ್ರಶ್ನಿಸಿದ ಪೀಠ ಜಾಹೀರಾತು ಯಾವ ಗಾತ್ರದಲ್ಲಿ ಪ್ರಕಟವಾಗಿದೆಯೋ ಅದೇ ರೀತಿಯ ಗಾತ್ರದಲ್ಲಿ ಕ್ಷಮೆ ಕೇಳಬೇಕೆಂದು ಸೂಚನೆ ನೀಡಿದೆ.