ಅಮೇರಿಕಾದಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

ಅಮೇರಿಕಾ, ಏ 09: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ 25 ವರ್ಷದ ಭಾರತೀಯ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರ್ಫಾತ್ ಅಮೆರಿಕದ ಕ್ಲೀವ್‌ಲ್ಯಾಂಡ್ ನಗರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಮೊಹಮ್ಮದ್ ಅಬ್ದುಲ್ ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಗಾಗಿ 2023 ರಲ್ಲಿ ಅಮೆರಿಕಕ್ಕೆ ತೆರಳಿದ್ದ. ಸುಮಾರು ಮೂರು ವಾರಗಳಿಂದ ನಾಪತ್ತೆಯಾಗಿದ್ದ ಈತನ ಪತ್ತೆಗೆ ದೂತಾವಾಸ ಕಚೇರಿ ಅಬ್ದುಲ್ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ತಿಳಿಸಿತ್ತು. ಆದರೆ ದುರಾದೃಷ್ಟವಶಾತ್ ಮಂಗಳವಾರ ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಹೈದರಾಬಾದ್‌ನ ನಾಚರಂ ಮೂಲದ ಅರ್ಫಾತ್, ಕ್ಲೀವ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಐಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಕಳೆದ ವರ್ಷ ಮೇ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿದ್ದರು. ಮಾರ್ಚ್ 7 ರಂದು ಕೊನೆಯದಾಗಿ ಮಾತನಾಡಿದ್ದ ನಂತರ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಅರ್ಫಾತ್ ತಂದೆ ಮೊಹಮ್ಮದ್ ಸಲೀಂ ಹೇಳಿದ್ದಾರೆ. ಮಾರ್ಚ್ 19 ರಂದು, ಸಲೀಮ್ ಅಪರಿಚಿತ ವ್ಯಕ್ತಿಯಿಂದ ಕರೆ ಸ್ವೀಕರಿಸಿದ್ದು, ಅರ್ಫಾತ್ ನನ್ನು ಡ್ರಗ್ಸ್ ಮಾರಾಟ ಮಾಡುವ ಗ್ಯಾಂಗ್ ಅಪಹರಿಸಿ 1,200 ಡಾಲರ್ ಗೆ ಬೇಡಿಕೆಯಿಟ್ಟಿದ್ದರು. ನನ್ನ ಮಗನೊಂದಿಗೆ ಮಾತನಾಡಲು ಕೇಳಿಕೊಂಡಾಗ ಅವರು ನಿರಾಕರಿಸಿದರು ಎಂದು ಹೇಳಿದ್ದಾರೆ

ಮೊಹಮ್ಮದ್ ಅಬ್ದುಲ್ ಅರ್ಫಾತ್ ಸಾವಿನ ಸಂಪೂರ್ಣ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಸಾಗಿಸಲು ನಾವು ದುಃಖಿತ ಕುಟುಂಬಕ್ಕೆ ಎಲ್ಲ ರೀತಿಯ ಸಹಾಯವನ್ನು ನೀಡುತ್ತಿದ್ದೇವೆ ದೂತಾವಾಸವು ಹೇಳಿದೆ.

ಅಮೇರಿಕಾದಲ್ಲಿ ಪದೇ ಪದೇ ಸಂಭವಿಸುತ್ತಿರುವ ಭಾರತ ಮೂಲದ ವಿದ್ಯಾರ್ಥಿಗಳ ನಿಗೂಢ ಸಾವಿನ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಓಹಿಯೋದಲ್ಲಿ ಭಾರತೀಯ ವಿದ್ಯಾರ್ಥಿ ಉಮಾ ಸತ್ಯ ಸಾಯಿ ಗಡ್ಡೆ ಮೃತದೇಹ ಪತ್ತೆಯಾಗಿತ್ತು.

You cannot copy content from Baravanige News

Scroll to Top