Thursday, May 9, 2024
Homeಸುದ್ದಿಕರಾವಳಿಏಪ್ರಿಲ್ 14ರಂದು ಮಂಗಳೂರಿಗೆ ಪ್ರಧಾನಿ ಮೋದಿ: ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿ

ಏಪ್ರಿಲ್ 14ರಂದು ಮಂಗಳೂರಿಗೆ ಪ್ರಧಾನಿ ಮೋದಿ: ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿ

ಬೆಂಗಳೂರು : ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಮಾವೇಶ ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ಸ್ಥಳಾಂತರಗೊಂಡಿದೆ. ಅದರಂತೆ, ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮಾವೇಶ ನಡೆಯಲಿದೆ.

ಈ ಮೊದಲು ಏಪ್ರಿಲ್ 14 ರಂದು ದೇವನಹಳ್ಳಿಯಲ್ಲಿ ಸಮಾವೇಶ ನಿಗದಿಯಾಗಿತ್ತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಸಮಾವೇಶ ಇದೀಗ ಮಂಗಳೂರಿಗೆ ಸ್ಥಳಾಂತರಗೊಂಡಿದೆ.

ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 6ರಿಂದ 7 ಗಂಟೆಯವರೆಗೆ ಹೆಬ್ಬಾಳ-ಬ್ಯಾಟರಾಯನಪುರದಲ್ಲಿ ರೋಡ್ ಶೋ ನಡೆಯಲಿದೆ.

ಕರ್ನಾಟಕದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಜೊತೆ ಕಳೆದ ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದ ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡಿದ್ದರು. ಬೂತ್ ಮಟ್ಟದಲ್ಲಿ ಚುನಾವಣಾ ಪ್ರಚಾರ ಯಾವ ರೀತಿಯಲ್ಲಿ ಸಾಗುತ್ತಿದೆ ಎಂಬುದನ್ನು ವಿಚಾರಿಸಿದ್ದರು. ಇದೀಗ ಖುದ್ದು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಕಾರ್ಯಕ್ಕೆ ವೇಗ ನೀಡಲಿದ್ದಾರೆ.

ಏಪ್ರಿಲ್ 14ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ನರೇಂದ್ರ ಮೋದಿ, ಮೊದಲಿಗೆ ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಪರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಎಂದು ಈ ಹಿಂದೆ ನಿಗದಿಯಾಗಿತ್ತು. ಸಮಾವೇಶ ಮುಗಿದ ನಂತರ ಬೆಂಗಳೂರಿಗೆ ಆಗಮಿಸಿ, ಸಂಜೆ ಶೋಭಾ ಕರಂದ್ಲಾಜೆ ಕ್ಷೇತ್ರವಾದ ಬೆಂಗಳೂರು ಉತ್ತರದಲ್ಲಿ ರೋಡ್ ಶೋ ನಡೆಸುವುದೆಂದು ನಿರ್ಧರಿಸಲಾಗಿತ್ತು. ಆದರೆ, ಇದೀಗ ಚಿಕ್ಕಬಳ್ಳಾಪುರದ ಬದಲು ಮಂಗಳೂರಿನಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ನಂತರ ಬೆಂಗಳೂರಿನಲ್ಲಿ ರೋಡ್ ಶೋ ನಿಗದಿಯಂತೆಯೇ ನಡೆಯಲಿದೆ.

ಕೆಲವು ದಿನಗಳ ಹಿಂದಷ್ಟೇ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಭ್ಯರ್ಥಿ ಡಾ. ಸಿನ್ ಮಂಜುನಾಥ್ ಪರ ರೋಡ್ ಶೋ ನಡೆಸಿದ್ದರು. ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ನಾಯಕರ ಜೊತೆ ಸಭೆ ನಡೆಸಿ, ರಾಜ್ಯದ ವಿವಿಧ ಕಡೆಗಳಲ್ಲಿ ಎದ್ದಿರುವ ಬಂಡಾಯವನ್ನು ಶಮನಗೊಳಿಸುವ ಕಾರ್ಯ ಮಾಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರದ ಅಖಾಡಕ್ಕೆ ಧುಮುಕುತ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News