Sunday, April 28, 2024
Homeಸುದ್ದಿಛೇ! ಇದೆಂಥಾ ಹೇಳಿಕೆ – ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲಿಷ್ ಬರೋಲ್ಲ, ಅವರನ್ನ ಗೆಲ್ಲಿಸಬೇಡಿ...

ಛೇ! ಇದೆಂಥಾ ಹೇಳಿಕೆ – ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲಿಷ್ ಬರೋಲ್ಲ, ಅವರನ್ನ ಗೆಲ್ಲಿಸಬೇಡಿ ಎಂದ ಜೆಪಿ ಹೆಗ್ಡೆ

ಉಡುಪಿ: ರಾಜ್ಯದಲ್ಲಿಯೂ ಲೋಕ ಕದನ ಸಾರ್ವತ್ರಿಕವಾಗಿ ಜೋರಾಗಿದೆ. ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಭರದಲ್ಲಿ ಪ್ರತಿಸ್ಪರ್ಧಿಗಳನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಲಾಗುತ್ತಿದೆ. ಅಂದಹಾಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಆಡಳಿತಾರೂಢ ಬಿಜೆಪಿ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಬಿಜೆಪಿ ಅಭ್ಯರ್ಥಿಯಾಗಿ ಕರ್ನಾಟಕದ ಅಟಲ್​ ಬಿಜಾರಿ ವಾಜಪೇಯಿ ಎಂದೇ ಜನಜನಿತರಾದ ಕೋಟ ಶ್ರೀನಿವಾಸ ಪೂಜಾರಿ ಕಣಕ್ಕಿಳಿದಿದ್ದರೆ, ಕೊನೆ ಕ್ಷಣದಲ್ಲಿ ಜಾತಿ ಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ ಎಂಬ ಸಂಭಾವಿತ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಈ ಇಬ್ಬರೂ ಹಿರಿಯರು ಕಣಕ್ಕೆ ಇಳಿಯುವ ಮೂಲಕ ಲೋಕಸಭಾ ಚುನಾವಣಾ ಸಮರಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಎಂದು ಜನ ಅಂದುಕೊಳ್ಳುತ್ತಿರುವಾಗಲೇ ಜೆಪಿ ಹೆಗ್ಡೆ ಅವರು ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ತುಸು ದುಬಾರಿ ಮಾತನ್ನೇ ಆಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲಿಷ್ ಬರೋಲ್ಲ, ಹಾಗಾಗಿ ಅವರನ್ನು ಗೆಲ್ಲಿಸಬೇಡಿ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಒಂದು ನಿಮಿಷ ತಾಳಿ… ಈ ಹಿಂದೆ ಇದೇ ಕ್ಷೇತ್ರದಲ್ಲಿ ಸಂಸದರಾಗಿದ್ದ ಶೋಭಾ ಕರಂದ್ಲಾಜೆ ಅವರು ಕೇಂದ್ರದಲ್ಲಿ ಮಂತ್ರಿಯೂ ಆಗಿ ಏಕೀ ಮಿನಿಟ್​ ಎನ್ನುತ್ತಾ ಹಿಂದಿ ಕಲಿತು ಸೈ ಅನ್ನಿಸಿಕೊಂಡಿದ್ದು, ಜೆಪಿ ಹೆಗ್ಡೆ ಮರೆತರಾ? ಎಂಬ ಪ್ರಶ್ನೆ ಕಾಡತೊಡಗಿದೆ.

ಸಂಸದರಾದವರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ವೈಯಕ್ತಿಕವಾಗಿ ಮಾತನಾಡಬೇಕಾಗುತ್ತದೆ. ಹಿಂದಿ ಅಥವಾ ಇಂಗ್ಲಿಷ್‌ ಬರದೇ ಲೋಕಸಭೆಯಲ್ಲಿ ವ್ಯವಹಾರ ಕಷ್ಟ ಸಾಧ್ಯ. ಕಚೇರಿ ವ್ಯವಹಾರಗಳಲ್ಲಿ ಸಮಸ್ಯೆಯಾಗುತ್ತದೆ. ಭಾಷಾಂತರಕಾರರಿಗೆ ಅವಕಾಶ ಇರಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟರೇ ಹಿಂದಿ ಅಥವಾ ಇಂಗ್ಲೀಷ್ ಬರುವುದಿಲ್ಲ. ಈ ಹಿನ್ನೆಲೆ ಯಲ್ಲಿ ಹೆಗ್ಡೆ ಅವರು ಬ್ರಹ್ಮಾವರದ ಚುನಾವಣಾ ಸಭೆಯಲ್ಲಿ ಮಾತನಾಡಿ, ಕೋಟ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲ, ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲ ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ. ಲೋಕಸಭೆಯಲ್ಲಿ ಈ ಹಿಂದೆ ನಾನು ಕನ್ನಡದಲ್ಲಿ ಭಾಷಣ ಮಾಡುತ್ತೇನೆ ಎಂದು ಹೇಳಿದೆ, ಆಗ ಯಾರು ನಿಮ್ಮ ಕನ್ನಡ ಭಾಷಣವನ್ನು ಕೇಳುವುದಿಲ್ಲ, ಹಿಂದಿ ಅಥವಾ ಇಂಗ್ಲಿಷಿನಲ್ಲಿ ಮಾತನಾಡಿದರೆ ಸಂಸದರು ಕೇಳುತ್ತಾರೆ ಎಂದು ಹೇಳಿದ್ದರು ಎಂದು ಹೆಗ್ಡೆ ತಮಗಾಗಿದ್ದ ಅನುಭವವನ್ನು ಸ್ಮರಿಸಿದ್ದಾರೆ.

6 ತಿಂಗಳಲ್ಲಿ ಹಿಂದಿ ಕಲಿಯುವೆ : ಕೋಟ ಕೂಲ್ ಕೂಲ್ ರಿಪ್ಲೇ!

ಪೂಜಾರಿಗೆ ಹಿಂದಿ-ಇಂಗ್ಲೀಷ್ ಬರೋಲ್ಲ. ಅವರಿಗೆ ಮತ ಹಾಕಬೇಡಿ ಎಂದು ಉಡುಪಿಯ ಪ್ರಜ್ಞಾವಂತ ಮತದಾರರಲ್ಲಿ ಜೆಪಿ ಹೆಗ್ಡೆ ಮನವಿ ಮಾಡಿಕೊಂಡಿರುವುದಕ್ಕೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ. ತಾವು ಸಂಸದರಾಗುತ್ತಿದ್ದಂತೆ ಆರೇ ತಿಂಗಳಲ್ಲಿ ಹಿಂದಿ ಕಲಿತು ತೋರಿಸುತ್ತೇನೆ ಎಂದಿದ್ದಾರೆ.

ಭಾಷೆ ನಮ್ಮ ಬದುಕಿನ ಭಾಗ ಅಷ್ಟೇ, ನನ್ನ ಮಾತೃಭಾಷೆ ಕನ್ನಡ ನನಗೆ ಚೆನ್ನಾಗಿ ಬರುತ್ತದೆ. ನನಗೆ ಭಾಷೆ ತೊಡಕಾಗುತ್ತದೆ ಎಂబ ಆತಂಕ ಮತದಾರರಿಗೆ ಬೇಡ, ಸಂಸದನಾಗಿ ಆರೇ ತಿಂಗಳಲ್ಲಿ ಹಿಂದಿಯಲ್ಲಿ ಭಾಷಣ ಮಾಡಿ, ನನ್ನ ಬಗ್ಗೆ ಆತಂಕ ಹೊಂದಿರುವ ಜಯಪ್ರಕಾಶ್ ಹೆಗ್ಡೆಯವರನ್ನೂ ಖುಷಿ ಪಡಿಸುತ್ತೇನೆ ಎಂದು ಕೂಲಾಗಿ ಹೇಳಿದ್ದಾರೆ. ಮತ್ತೊಮ್ಮೆ ಕ್ಷೇತ್ರದ ಹಿಂದಿನ ಸಂಸದೆಯ ಏಕೀ ಮಿನಿಟ್​ ನಲ್ಲಿ ಹಿಂದಿ ಕಲಿತ ಸಾಹಸವನ್ನು ಸ್ಮರಿಸುವುದಾದರೆ ಕೋಟ ಅವರಿಗೆ ಹಿಂದಿ ಕಗ್ಗಂಟೇನೂ ಆಗದು ಅನಿಸುತ್ತದೆ. ಅದಕ್ಕೂ ಮೊದಲು ಈ ಬಾರಿ ಇಲ್ಲಿ ಗೆಲುವು ಯಾರಿಗೆ ಎಂಬುದನ್ನು ಮತದಾರರ ಪ್ರಭುಗಳು ನಿರ್ಧರಿಸಬೇಕಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News