ಉಡುಪಿ: 7 ಮಂದಿ ಮೀನುಗಾರರ ಅಪಹರಣ; ಲಕ್ಷಾಂತರ ಮೌಲ್ಯದ ಮೀನು, ಡೀಸೆಲ್ ದೋಚಿದ ಅಪರಿಚಿತರು

ಉಡುಪಿ, ಫೆ 28: ಬೋಟ್ ಒಂದರಲ್ಲಿ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ 7 ಮಂದಿ ಮೀನುಗಾರರನ್ನು ಬಂಧಿಸಿ ಬೋಟ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ಮೀನು, ಡೀಸೆಲ್ ಅನ್ನು ಅಪರಿಚಿತ ಅಪಹರಣಕಾರರು ದೋಚಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಮಲ್ಪೆ ಕೊಡವೂರು ಗ್ರಾಮ ನಿವಾಸಿ ಚೇತನ್‌ ಸಾಲಿಯಾನ್‌ (42) ಅವರು ದೂರು ದಾಖಲಿಸಿದ್ದಾರೆ.

ದೂರಿನ ಅನುಸಾರ ತಮ್ಮ ಕೃಷ್ಣನಂದನ ಎಂಬ ಲೈಲಾನ್‌ ಬೋಟ್‌ ನಲ್ಲಿ ಫೆ. 19ರಂದು ನಾಗರಾಜ್‌ ಹರಿಕಾಂತ, ನಾಗರಾಜ್‌ ಹೆಚ್.‌ ಹರಿಕಾಂತ, ಅರುಣ್‌ ಹರಿಕಾಂತ ಅಂಕೋಲ, ಅಶೋಕ ಕುಮುಟ, ಕಾರ್ತಿಕ್‌ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಮಣ್ಯ ಖಾರ್ವಿ ಅವರು ಆಳ ಸಮುದ್ರಕ್ಕೆ ಮೀನು ಹಿಡಿಯಲು ತೆರಳಿರುತ್ತಾರೆ. ಫೆ. 27 ಬೆಳಗ್ಗೆ ನಾಗರಾಜ್‌ ಹರಿಕಾಂತ ಎಂಬ ಮೀನುಗಾರ ಫೋನ್ ಕರೆ ಮಾಡಿ, ಫೆ. 26 ಅಥವಾ 27ರ ರಾತ್ರಿ ಮೀನುಗಾರಿಕೆ ಮುಗಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ತುಂಬಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿದ್ದೆವು. ಆಗ ನಮ್ಮ ಬೋಟ್‌ ನ ಬಲೆ ಫ್ಯಾನ್‌ ಗೆ ಬಿದ್ದ ಕಾರಣ ಬೋಟ್‌ ಬಂದ್‌ ಆಗಿ ನಿಂತಿದೆ. ಈ ಸಂದರ್ಭ ಸುಮಾರು 25 ಜನ ಅಪಹರಣಕಾರರು ಏಕಾಏಕಿ ಆಕ್ರಮಣ ಮಾಡಿ ಬೋಟ್ ಅನ್ನು ತೀರಕ್ಕೆ ಎಳೆದುಕೊಂಡು ಹೋಗಿದ್ದಾರೆ. ನಮ್ಮನ್ನು ಅಪಹರಿಸಿ ಬೋಟ್‌ ನಲ್ಲಿದ್ದ ಸುಮಾರು 8 ಲಕ್ಷ ಮೌಲ್ಯದ ಮೀನು ಹಾಗೂ ಬೋಟ್‌ ಗೆ ತುಂಬಿಸಿದ 5,76,700/- ಮೌಲ್ಯದ 7,500 ಲೀಟರ್‌ ಡೀಸೆಲ್‌ ದೋಚಿದ್ದಾರೆ. ಮೀನುಗಾರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ದೂರುದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿ, ಮೀನುಗಾರರನ್ನು ಅಪರಿಚಿತ ಅಪಹರಣಕಾರರು ಬಂಧನದಲ್ಲಿರಿಸಿ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂದೆ ನೀಡುತ್ತಿದ್ದಾರೆ ಎಂಬ ದೂರಿನ ಅನುಸಾರ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ 395, 365, 342 ಜೊತೆಗೆ ಐಪಿಸಿ ಸೆಕ್ಷನ್ 149ರ ಅಡಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top