ಉಡುಪಿ ಚಿಕ್ಕಮಗಳೂರು ಬಿಟ್ಟು ಬೇರೆ ಲೋಕಸಭಾ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ – ಶೋಭಾ ಕರಂದ್ಲಾಜೆ

ಉಡುಪಿ : ನಾನು ಉಡುಪಿ ಚಿಕ್ಕಮಗಳೂರು ಬಿಟ್ಟು ಬೇರೆ ಲೋಕಸಭಾ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತೆ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಕಚೇರಿ ಉದ್ಘಾಟನೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ‘ಸ್ವಂತ ಜಿಲ್ಲೆ ಅಲ್ಲವಾದರೂ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಮತದಾರರು ಎರಡು ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಉಡುಪಿ –ಚಿಕ್ಕಮಗಳೂರು ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ’ ಎಂದರು.

ರಾಜ್ಯದ ಐದಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಮಾಧ್ಯಮಗಳಲ್ಲಿ ನನ್ನ ಹೆಸರು ಕೇಳಿಬರುತ್ತಿದ್ದು, ಬೇರೆಲ್ಲಿಯೂ ಸ್ಪರ್ಧಿಸುವ ಮನಸ್ಸಿಲ್ಲ ಎಂದರು. ಈ ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ, ಅವುಗಳ ಆಧಾರದಲ್ಲಿಯೇ ನಾನು ಮತ ಕೇಳುತ್ತೇನೆ ಎಂದರು. ಆದರೆ ಪಕ್ಷ ಹೇಳಿದರೆ, ಬೇರೆ ಕ್ಷೇತ್ರಕ್ಕೆ ಹೋಗುವಂತೆ ಸೂಚನೆ ನೀಡಿದರೆ ಅದಕ್ಕೂನಾನು ಬದ್ಧಳಿದ್ದೇನೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಕಾಂಗ್ರೆಸ್‌ಗೆ ಹೋಗ್ತಾರೆ. ಯಾರು ಇಲ್ಲಿಯೇ ಇರ್ತಾರೆ, ನನಗೆ ಗೊತ್ತಿಲ್ಲ. ಆದರೆ ಬಿಜೆಪಿಯಿಂದ ಲಾಭ ಪಡೆದು ಈಗ ಬಿಟ್ಟು ಹೋಗ್ತಾರೆ ಅಂದ್ರೆ ಅದರಿಂದ ಅವರಿಗೇನೇ ನಷ್ಟ ಎಂದರು. ಅಧಿಕಾರದಲ್ಲಿದ್ದಾಗ ಪಕ್ಷದಲ್ಲಿರುವುದು, ಅಧಿಕಾರದಲ್ಲಿ ಇಲ್ಲದಿದ್ದಾಗ ಪಕ್ಷ ಬಿಟ್ಟು ಹೋಗುವುದು ಬಿಜೆಪಿ ಕಾರ್ಯಕರ್ತರ ಮನಸ್ಥಿತಿ ಅಲ್ಲ ಎಂದರು.

You cannot copy content from Baravanige News

Scroll to Top