ಉಡುಪಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ; 8 ಮಂದಿ ಮೀನುಗಾರರ ರಕ್ಷಣೆ, ಲಕ್ಷಾಂತರ ರೂ. ನಷ್ಟ..!

ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಗೊಂಡು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟ್ ನವರು ರಕ್ಷಿಸಿದ್ದಾರೆ.

ಕಡೆಕಾರು ರಕ್ಷಣಾ ಸಂಸ್ಥೆಯ ಶ್ರೀ ನಾರಾಯಣ ಎಂಬ ಬೋಟ್ ಡಿ.12ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಆದರೆ ಡಿಸೆಂಬರ್ 19 ರಂದು ಬೆಳಗ್ಗೆ ಸಮುದ್ರದಲ್ಲಿ ಮಲ್ಪೆಯಿಂದ 26 ಮಾರು ಆಳದಲ್ಲಿ ದೋಣಿ ಮುಳುಗಡೆಗೊಂಡಿದೆ.

ಬೆಳಗ್ಗೆ 6.30ರ ಸುಮಾರಿಗೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ನೀರಿನಡಿಯಲ್ಲಿ ಯಾವುದೋ ವಸ್ತು ದೋಣಿಯ ತಳ ಒಡೆದು ನೀರು ನುಗ್ಗಲು ಆರಂಭಿಸಿದ್ದು, ಸಿಬ್ಬಂದಿ ಕೂಡಲೇ ವೈರ್ ಲೆಸ್ ಸಂಪರ್ಕ ಬಳಸಿ ಇತರೆ ಬೋಟ್ ಗಳಿಗೆ ಸಂದೇಶ ರವಾನಿಸಿದ್ದಾರೆ.

ಶ್ರೀ ಮೂಕಾಂಬಿಕಾ ಅನುಗ್ರಹದ ದೋಣಿಯಲ್ಲಿದ್ದವರು ಸ್ಥಳಕ್ಕೆ ಧಾವಿಸಿ ಮುಳುಗುತ್ತಿರುವ ದೋಣಿಯನ್ನು ಉಳಿಸಲು ಪ್ರಯತ್ನಿಸಿದರು, ಆದರೆ ನೀರಿನ ಅಬ್ಬರ ಜಾಸ್ತಿಯಾಗಿದ್ದರಿಂದ ಅವರ ಪ್ರಯತ್ನ ವ್ಯರ್ಥವಾಯಿತು. 8 ಗಂಟೆ ವೇಳೆಗೆ ದೋಣಿ ಸಂಪೂರ್ಣ ಮುಳುಗಡೆಯಾಗಿತ್ತು. ಅದೃಷ್ಟವಶಾತ್ ಮೂಕಾಂಬಿಕಾ ದೋಣಿಯ ಮೂಲಕ ಮೀನುಗಾರರನ್ನು ಮರಳಿ ದಡಕ್ಕೆ ಕರೆತರಲಾಯಿತು. ಈ ಘಟನೆಯಿಂದ ಸುಮಾರು 18 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

You cannot copy content from Baravanige News

Scroll to Top