ಪ್ರೇಮಿಗಳು ಪರಾರಿ: ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ…!!

ರಾಣೆಬೆನ್ನೂರು, ಡಿ.19: ಯುವಕ, ಯುವತಿ ಇಬ್ಬರೂ ಪ್ರೀತಿಸಿ ಓಡಿ ಹೋಗಿದ್ದಾರೆ ಎಂಬ ಕಾರಣಕ್ಕೆ ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ರಾಣೇಬೆನ್ನೂರಿನ ಮುದೇನೂರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಯುವಕನ ಮಾವ, ಗ್ರಾಪಂ ಸದಸ್ಯ ಪ್ರಶಾಂತ ಕಬ್ಬಾರ (34) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜೆಪ್ಪ ಮರಿಯಪ್ಪ ಕಮದೋಡ, ಬಸವರಾಜಪ್ಪ ನೀಲಪ್ಪ ಬೆನಕನಕೊಂಡ, ಹರೀಶ ಸಣ್ಣಗುಡ್ಡಪ್ಪ ಬೆನಕನಕೊಂಡ, ಸುನೀಲ ಉಚ್ಚಂಗೆಪ್ಪ ಮೂಕಮ್ಮನವರ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮುದೇನೂರ ಗ್ರಾಮದ ಯುವಕ ಪ್ರಕಾಶ ಎಂಬುವನು ಚಳಗೇರಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ಓಡಿ ಹೋಗಿದ್ದರು. ಹಿರಿಯರು ಪ್ರಕಾಶನನ್ನು ನೋಡಿಕೊಳ್ಳುತ್ತಿದ್ದ ಮಾವ ಪ್ರಶಾಂತನೊಂದಿಗೆ ಪಂಚಾಯಿತಿ ಮಾಡಿ ಅಳಿಯ ಪ್ರಕಾಶನನ್ನು ಕರೆದುಕೊಂಡು ಬರಲು ಹೇಳಿದ್ದು ಕೋಪಗೊಂಡ ಯುವತಿಯ ಕುಟುಂಬದವರು ಕಾರು, ಬೈಕ್ ತೆಗೆದುಕೊಂಡು ಪ್ರಶಾಂತನ ಮನೆ ಬಳಿ ಬಂದು ಆತನ ಮೇಲೆ ಹಾಗೂ ಯುವಕನ ಪಾಲಕರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಪ್ರಶಾಂತನನ್ನು ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿ ರಾಣೆಬೆನ್ನೂರ ನಗರದ ಜಾನುವಾರು ಮಾರುಕಟ್ಟೆ ಆವರಣಕ್ಕೆ ಕರೆತಂದು ಬಟ್ಟೆಗಳನ್ನು ಹರಿದು ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಅರೆಬೆತ್ತಲೆಗೊಳಿಸಿ ಹೊಡೆದಿದ್ದಾರೆ ಎಂದು ಹಲ್ಲೆಗೊಳಗಾದವರು ದೂರಿನಲ್ಲಿ ಆರೋಪಿಸಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದೆ. ಓಡಿ ಹೋಗಿರುವ ಯುವಕ, ಯುವತಿ ಈಗಾಗಲೇ ವಾಪಸ್ ಬಂದಿದ್ದು ನಮಗೆ ಜೀವ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಅವರಿಗೆ ರಕ್ಷಣೆ ಜತೆಗೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಹಾವೇರಿ ಎಸ್​ಪಿ ಅಂಶುಕುಮಾರ ಹೇಳಿದ್ದಾರೆ.

You cannot copy content from Baravanige News

Scroll to Top