ನವದೆಹಲಿ : ಆಗಸ್ಟ್ 5, 2019 ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಮ್ಮು-ಕಾಶ್ಮೀರಕ್ಕಿದ್ದ ಆರ್ಟಿಕಲ್ 370 ರದ್ದು ಮಾಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಜೊತೆಗೆ ಕೇಂದ್ರದ ಕ್ರಮ ಸಂವಿಧಾನಬದ್ಧವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಂದಿನ ರಾಜ್ಯ, ಇಂದಿನ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಆರ್ಟಿಕಲ್ 370 ರದ್ದತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಒಟ್ಟು 22 ಅರ್ಜಿಗಳು ಸಲ್ಲಿಕೆ ಆಗಿದ್ದವು.
ಸಾಂವಿಧಾನಿಕ ಪೀಠದಿಂದ ತೀರ್ಪು
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಪಂಚ ಸದಸ್ಯ ಪೀಠದಲ್ಲಿದ್ದಾರೆ.
ಒಟ್ಟು ಮೂರು ತೀರ್ಪು ಇವೆ. ಒಂದು ಸಿಜೆಐ ಅವರು ಬರೆದಿರೋದು. ಇನ್ನೊಂದು ಜಸ್ಟೀಸ್ಗಳಾದ ಗವಾಯಿ, ಸೂರ್ಯ ಕಾಂತ್, ಖನ್ನಾ ಅವರು ಬರೆದಿರುವ ತೀರ್ಪು ಇನ್ನು ನ್ಯಾಯಮೂರ್ತಿ ಕೌಲ್ ಅವರು ಪ್ರತ್ಯೇಕ ತೀರ್ಪು ಬರೆದಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.
ಮುಖ್ಯ ನ್ಯಾಯಮೂರ್ತಿ ಹೇಳಿದ್ದೇನು..?
ತುರ್ತು ಪರಿಸ್ಥಿತಿ ಇದ್ದಾಗ ಮಾತ್ರ ರಾಷ್ಟ್ರಪತಿ ಮತ್ತು ಗವರ್ನರ್ಗೆ ಸೀಮಿತ ಅಧಿಕಾರ ಇರುತ್ತದೆ. ರಾಷ್ಟ್ರಪತಿಗಳ ಅಧಿಕಾರ ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಆಡಳಿತವನ್ನು ತನ್ನದೆಂದು ಭಾವಿಸುವುದು ಸರಿಯಲ್ಲ ಎಂಬ ಅಭಿಪ್ರಾಯಪಟ್ಟಿದೆ.
ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಸಿಂಧುತ್ವದ ಹಾಗೂ ಸರ್ಕಾರದ ಆದೇಶದ ಸಿಂಧುತ್ವದ ಬಗ್ಗೆಯೂ ಅವಲೋಕಿಸಲು ಸುಪ್ರೀಂ ಕೋರ್ಟ್ ಹಿಂದೇಟು ಹಾಕಿದೆ. ಕೇಂದ್ರ ಸರ್ಕಾರದ ಪ್ರತಿಯೊಂದು ಕ್ರಮವನ್ನೂ ಪ್ರಶ್ನಿಸಲು ಸಾಧ್ಯವಿಲ್ಲ. ರಾಷ್ಟ್ರಪತಿ ಆಳ್ವಿಕೆ ಅವಧಿಯಲ್ಲಿ ರಾಜ್ಯದಲ್ಲಿ ಬದಲಾಯಿಸಲಾಗದ ಕ್ರಮಗಳನ್ನು ಒಕ್ಕೂಟವು ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನು ಅಂಗೀಕರಿಸಲು ಸಾಧ್ಯವಿಲ್ಲ. ಮಹಾರಾಜರ ಘೋಷಣೆಯು ಭಾರತದ ಸಂವಿಧಾನವನ್ನು ರದ್ದುಗೊಳಿಸುತ್ತದೆ ಎಂದು ಹೇಳಿದೆ. ಇದರೊಂದಿಗೆ, ಇನ್‌ಸ್ಟ್ರುಮೆಂಟ್ ಆಫ್ ಅಕ್ಸೆಷನ್‌ನ ಪ್ಯಾರಾ (the para of Instrument of Accession) ಅಸ್ತಿತ್ವದಲ್ಲಿಲ್ಲ.
ಜಮ್ಮು ಮತ್ತು ಕಾಶ್ಮೀರವು ಭಾರತದ ಒಕ್ಕೂಟಕ್ಕೆ ಸೇರಿದಾಗ ಸಾರ್ವಭೌಮತ್ವ ಅಥವಾ ಆಂತರಿಕ ಸಾರ್ವಭೌಮತ್ವದ ಅಂಶವನ್ನು ಉಳಿಸಿಕೊಂಡಿತ್ತೇ? ನಮ್ಮ ಪ್ರಕಾರ ಇಲ್ಲ. ಜಮ್ಮು ಮತ್ತು ಕಾಶ್ಮೀರ ಸಾರ್ವಭೌಮತ್ವವನ್ನು ಉಳಿಸಿಕೊಂಡಿದೆ ಎಂದು ಸಂವಿಧಾನ ಹೇಳುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಸಂವಿಧಾನದಲ್ಲಿ ಸಾರ್ವಭೌಮತ್ವದ ಉಲ್ಲೇಖವಿಲ್ಲ. ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಯಿತು ಎಂಬುದು ಭಾರತದ ಸಂವಿಧಾನದ 1 ಮತ್ತು 370 ನೇ ವಿಧಿಗಳಿಂದ ಸ್ಪಷ್ಟವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಏನಿದು ಆರ್ಟಿಕಲ್ 370..?
ಭಾರತ ಸಂವಿಧಾನದ 370ನೇ ವಿಧಿ ಮತ್ತು 35ನೇ A ವಿಧಿ ಎರಡೂ ಒಂದಕ್ಕೊಂದು ಸಂಬಂಧ ಪಟ್ಟಿವೆ. 370ನೇ ವಿಧಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ವಿಧಿ ಆಗಿತ್ತು. ಅದನ್ನು 2019ರಲ್ಲಿ ಮೋದಿ ಸರ್ಕಾರ ರದ್ದು ಮಾಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿದ್ದವು.
ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು : ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ
