ಮುರುಡೇಶ್ವರದ ರಂಗು ಹೆಚ್ಚಿಸಿದ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್

ಕಾರವಾರ: ವೀಕೆಂಡ್, ರಜಾ ದಿನಗಳು ಬಂತೆಂದರೇ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಅದರಲ್ಲೂ ಕರಾವಳಿಯ ಮುರುಡೇಶ್ವರದಲ್ಲಿ ನಾನಾ ಭಾಗದಿಂದ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಸಮುದ್ರ ಸ್ನಾನದ ಜೊತೆ ಜಲಸಾಹಸ ಕ್ರೀಡೆ, ಸ್ಕೂಬಾ ಡೈವ್‌ನಂತಹ ಚಟುವಟಿಕೆಯಲ್ಲಿ ಭಾಗಿಯಾಗುವ ಪ್ರವಾಸಿಗರಿಗೆ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್ ತಯಾರಾಗಿದ್ದು, ಸಮುದ್ರದಲ್ಲಿ ಹೆಜ್ಜೆ ಹಾಕಲು ಇದೀಗ ಅವಕಾಶ ಒದಗಿ ಬಂದಿದೆ.

ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಮುರುಡೇಶ್ವರಕ್ಕೆ ಪ್ರತಿ ತಿಂಗಳು ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಉಡುಪಿಯ ಮಲ್ಪೆ ಬೀಚ್‌ನಲ್ಲಿ 100 ಮೀಟರ್ ಫ್ಲೋಟಿಂಗ್ ಬ್ರಿಡ್ಜ್‌ ಅನ್ನು 80 ಲಕ್ಷ ರೂ. ಖರ್ಚು ಮಾಡಿ ನಿರ್ಮಿಸಲಾಗಿತ್ತು. ಆದರೆ ಸಮುದ್ರದ ಅಲೆಗೆ ಈ ಫ್ಲೋಟಿಂಗ್ ಬ್ರಿಡ್ಜ್ ಕಿತ್ತುಹೋಗಿ ಪ್ರವಾಸಿಗರಿಗೆ ನಿರಾಸೆ ತಂದೊಡ್ಡಿತ್ತು. ಆದರೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ 130 ಮೀಟರ್ ಉದ್ದದ ಒಂದು ಕೋಟಿ ವೆಚ್ಚದ ಫ್ಲೋಟಿಂಗ್ ಬ್ರಿಡ್ಜ್ ಅನ್ನು ಓಶಿಯನ್ ಅಡ್ವೆಂಚರ್ಸ್ ಸಂಸ್ಥೆ ನಿರ್ಮಿಸಿ ಇಂದು ಪ್ರವಾಸಿಗರಿಗೆ ಅರ್ಪಣೆ ಮಾಡಿದೆ.

ಪ್ರವಾಸಿಗರ ಆಕರ್ಷಣೆಗಾಗಿ ಬೋಟಿಂಗ್, ವಾಟರ್ ಸ್ಕೂಟರ್, ಫ್ಲೋಟಿಂಗ್ ಬ್ರಿಡ್ಜ್, ಪ್ಯಾರಾಚೂಟ್ ಮೊದಲಾದ ಮನೋರಂಜನಾ ಸಾಧನ ಮುರುಡೇಶ್ವರದಲ್ಲಿ ಪ್ರವಾಸಿಗರಿಗಾಗಿ ಲಭ್ಯವಿದೆ. ಪ್ರವಾಸಿಗರು ಇವುಗಳ ಭರಪೂರ ಆನಂದ ಪಡೆಯುತ್ತಿದ್ದಾರೆ. ಸುಮಾರು 130 ಮೀ. ಉದ್ದ, 3.50 ಮೀ. ಅಗಲವಿರುವ ಈ ಸೇತುವೆಯ ಎರಡೂ ಬದಿಯಲ್ಲಿ ಪ್ರವಾಸಿಗರ ರಕ್ಷಣೆಗೆ ರೈಲಿಂಗ್ಸ್ ಅಳವಡಿಸಲಾಗಿದ್ದು, ಸಮುದ್ರಕ್ಕೆ ಬೀಳುವ ಅಪಾಯ ಕಡಿಮೆ. ಪ್ರವಾಸಿಗರ ರಕ್ಷಣೆಗಾಗಿ ಲೈಫ್ ಗಾರ್ಡ್‌ಗಳು ಇರಲಿದ್ದಾರೆ.

ತೇಲುವ ಸೇತುವೆಯ ಅನುಭವ ಪಡೆಯಲಿಚ್ಛಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜಾಕೆಟ್ ತೊಡಬೇಕಿದೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಅಲೆಗಳ ಹೊಡೆತಕ್ಕೆ ತೇಲಿಹೋಗುವ ಭಯವಿಲ್ಲ. ಜೊತೆಗೆ ಮಳೆಗಾಲದಲ್ಲಿ ನಿರ್ಬಂಧಿತ ದಿನ ಹೊರತುಪಡಿಸಿ ಉಳಿದ ದಿನಗಳು ಪ್ರವಾಸಿಗರಿಗೆ ಫ್ಲೋಟಿಂಗ್ ಬ್ರಿಡ್ಜ್‌ನಲ್ಲಿ ಸೀ ವಾಕ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

You cannot copy content from Baravanige News

Scroll to Top