ಶಬರಿಮಲೆಗೆ ಮೊದಲ ಬಾರಿ ಭೇಟಿ ನೀಡಿ ಹರಕೆ ತೀರಿಸಿದ ಶತಾಯುಷಿ..!

ಶಬರಿಮಲೆ : ಕೇರಳದ ವಯನಾಡ್ ಮೂಲದ ಶತಾಯುಷಿಯೊಬ್ಬರು 41 ದಿನಗಳ ಕಠಿಣ ವ್ರತ ಕೈಗೊಂಡು ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದೆ.

ಶತಾಯುಷಿ ವಯನಾಡಿನ ಮೂನ್ನನಕುಜಿಯ ಪಾರುಕುಟ್ಟಿಯಮ್ಮ 41 ದಿನಗಳ ವ್ರತವನ್ನು ಮಾಡಿ ತನ್ನ ಮಕ್ಕಳು ಹಾಗೂ ಮೊಮ್ಮಕಳೊಂದಿಗೆ ಬೆಟ್ಟದ ದೇಗುಲ ಶಬರಿಮಲೆಗೆ ತನ್ನ ಚೊಚ್ಚಲ ಯಾತ್ರೆ ಕೈಗೊಂಡಿದ್ದಾರೆ. ನೂರು ವರ್ಷದ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಚೊಚ್ಚಲ ಭೇಟಿ ನೀಡಿದ್ದರಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಮೊದಲ ಬಾರಿಗೆ ಶಬರಿಮಲೆ ಯಾತ್ರೆ ಕೈಗೊಂಡ ಪಾರುಕುಟ್ಟಿಯಮ್ಮ ದಾರಿಯುದ್ದಕ್ಕೂ, ಕಡಂಪುಳ, ಗುರುವಾಯೂರ್, ವೈಕೋಮ್ ಮತ್ತು ಎಟ್ಟುಮನೂರ್ ಮುಂತಾದ ದೇವಾಲಯಗಳಲ್ಲಿ ದರ್ಶನ ಪಡೆದು ಶಬರಿಮಲೆ ತಲುಪಿದ್ದಾರೆ. ಪಂಪಾ ನದಿ ಬಳಿಯಿಂದ ಪಲ್ಲಕ್ಕಿಯಲ್ಲಿ ಆಕೆಯನ್ನು ಸನ್ನಿಧಾನಕ್ಕೆ ಕರೆತರಲಾಯಿತು. ಪಾರುಕುಟ್ಟಿಯಮ್ಮ ಆಗಮಿಸಿದ ಸುದ್ದಿ ತಿಳಿದ ದೇವಸ್ವಂ ಮಂಡಳಿಯವರು ಆಕೆಗೆ ಪೊನ್ನಡ (ಚಿನ್ನದ ದಾರದಿಂದ ನೇಯ್ದ ಬಟ್ಟೆ) ನೀಡಿ ಗೌರವಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪಾರುಕುಟ್ಟಿಯಮ್ಮ, ದಾರಿಯುದ್ದಕ್ಕೂ ತನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಜೊತೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದವರಿಗೆ ಒಳ್ಳೆಯದಾಗಲಿ. ತನ್ನ ಮೊಮ್ಮಗನ ಪತ್ನಿ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದಾಳೆ. ಆದಷ್ಟು ಬೇಗ ಇಸ್ರೇಲ್-ಹಮಾಸ್ ಕದನ ನಿಲ್ಲಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.

You cannot copy content from Baravanige News

Scroll to Top