ಭಾರತದ ರಾಷ್ಟ್ರೀಯ ತಂಡದ ಎಲ್ಲಾ ವಿಧದ ಪಂದ್ಯಾಟಗಳಿಂದ ನಿವೃತ್ತಿಯಾಗಿರುವ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ ಕ್ರಿಕೆಟ್ ಗೂ ನಿವೃತ್ತಿ ಘೋಷಣೆ ಮಾಡುತ್ತಾರೆನ್ನುವ ಊಹಾಪೋಹಗಳಿತ್ತು. ಆದರೆ, ಇದೀಗ 2024ರ ಐಪಿಎಲ್ ಪಂದ್ಯಕ್ಕೆ ಸಜ್ಜಾಗುವ ಮೂಲಕ ತಮ್ಮ ನಿವೃತ್ತಿಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಐಪಿಎಲ್ ಆರಂಭವಾಗುವ ಮೊದಲು ಪ್ರತಿ ವರ್ಷ ಎಂಎಸ್ ಧೋನಿ ರಾಂಚಿಯ ಮಾ ಅಂಬೆ ದೇವಸ್ಥಾನದಿಂದ ಆಶೀರ್ವಾದ ಪಡೆಯುವುದು ಪ್ರತಿ ವರ್ಷ ಆಚರಣೆಯಾಗಿದೆ. ಅದೇ ರೀತಿ ಈ ಐಪಿಎಲ್ 2024 ರ ಸೀಸನ್‌ಗೆ ಮುಂಚಿತವಾಗಿ ಧೋನಿ ಮಾ ಅಂಬೆ ದೇವರ ದರ್ಶನ ಪಡೆಯುವ ವೈರಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಧೋನಿ ಅವರ ಅಪ್ಪಟ ಅಭಿಮಾನಿಯೋರ್ವರು ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಮೊಣಕಾಲು ನೋವಿನ ನಡುವೆ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದ ಧೋನಿ, ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈಗ ಚೇತರಿಸಿಕೊಂಡಿರುವ ಅವರು ಕಳೆದ ವರ್ಷದಂತೆ ಧೋನಿ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿಯಲ್ಲಿ ತರಬೇತಿ ಪಡೆದು 2024ರ ಐಪಿಎಲ್ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ.