Monday, July 15, 2024
Homeಸುದ್ದಿರಾಜ್ಯತುಮಕೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ : 5 ನಿಮಿಷದ ವಿಡಿಯೋದಲ್ಲಿ ಸ್ಫೋಟಕ ಅಂಶ ಬಹಿರಂಗ

ತುಮಕೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ : 5 ನಿಮಿಷದ ವಿಡಿಯೋದಲ್ಲಿ ಸ್ಫೋಟಕ ಅಂಶ ಬಹಿರಂಗ

ತುಮಕೂರು : ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ಬಳಿಕ ದಂಪತಿಯೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಪತಿ ಗರೀಬ್ ಸಾಬ್, ಪತ್ನಿ ಸುಮಯ್ಯ, ಮಗಳು ಹಜೀನಾ, ಗಂಡು ಮಕ್ಕಳಾದ ಮೊಹ್ಮದ್ ಶಬೀರ್, ಮೊಹಮದ್ ಮುನೀರ್ ಮೃತರು.

ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಎರಡು ಪುಟಗಳ ಡೆತ್‌ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ಹಾಗೇ ಆತ್ಮಹತ್ಯೆಗೂ ಮೊದಲು ವೀಡಿಯೋ ಸಹ ಮಾಡಿದ್ದು, ಆ ವೀಡಿಯೋದಲ್ಲಿ ಐವರ ಹೆಸರಗಳನ್ನು ಹೇಳಿದ್ದಾರೆ. ಇದೀಗ ಪೊಲೀಸರು ಆ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವೀಡಿಯೋನಲ್ಲೇನಿದೆ..!??

ಸಾವಿಗೂ ಮುನ್ನ ಸಂಬಂಧಿಕರಿಗೆ 5 ನಿಮಿಷ 22 ಸೆಕೆಂಡ್ ವೀಡಿಯೋವನ್ನು ಗರೀಬ್ ಸಾಬ್ ಕಳುಹಿಸಿದ್ದಾರೆ. ಅದರಲ್ಲಿ ಅವರು ಮಾತನಾಡಿರುವ ಅಂಶ ಹೀಗಿದೆ.

ನಮ್ಮ ಜಿಲ್ಲೆಯ ಗೃಹ ಮಂತ್ರಿ ಸಾರ್ ಅವರಿಗೆ ನಮಸ್ತೆ. ನಾವು ಲಕ್ಕನಹಳ್ಳಿ ವಾಸಿಯಾಗಿದ್ದು, ಬಡ ಕುಟುಂಬದಲ್ಲಿ ಜನಿಸಿದ್ದೀವಿ. ನಮ್ಮ ಮಕ್ಕಳನ್ನ ಓದಿಸಬೇಕೆಂದು ತುಮಕೂರಿಗೆ ಬಂದೆವು. ತುಮಕೂರಿನ ಸದಾಶಿವ ನಗರದ ಕೃಷ್ಣಾ ಬೇಕರಿ ಪಕ್ಕದ ನಾಲ್ಕನೇ ಮುಖ್ಯ ರಸ್ತೆಯ ಮೂರನೇ ಕ್ರಾಸ್ ಬಿ ನಲ್ಲಿ ಮಹಡಿ ಮನೆಯಲ್ಲಿ ಬಾಡಿಗೆ ಇದ್ದೆ. ನಮ್ಮ ಮನೆಯ ಕೆಳಗೆ ಖಲಂದರ್ ಅಂತಾ ಇದ್ದಾನೆ. ಅವನು ದೊಡ್ಡ ರಾಕ್ಷಸ. ಬಡತನದಲ್ಲಿ ಹೇಗೋ ಜೀವನ ಮಾಡ್ಕೊಂಡಿದ್ದೆ. ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ತುಂಬಾ ಹಿಂಸೆ ಕೊಟ್ಟ. ನಾನು ಯಾರ ಹತ್ತಿರ ಆದ್ರೂ ವ್ಯವಹಾರ ಮಾಡಿದ್ರೆ, ಅವರ ಹತ್ತಿರ ಇಲ್ಲಸಲ್ಲದನ್ನ ಹೇಳುತ್ತಿದ್ದ. ತುಂಬಾ ದೌರ್ಜನ್ಯ ಮಾಡಿದ್ದಾನೆ. ನಮ್ಮ ಮಕ್ಕಳಿಗೆ ಎಲ್ಲರ ಎದುರು ಹೊಡೆದಿದ್ದಾನೆ. ಆಗ ನ್ಯಾಯ ಕೇಳಿದ್ರೆ ಅವರು ಕೂಡ ಅವನಿಗೆ ಸಪೋರ್ಟ್ ಮಾಡಿದ್ರು, ಅವನು ದುಡ್ಡಿರೋನು. ನಾವು ಬಾಡಿಗೆಯಲ್ಲಿದ್ವಿ, ಅವನು ಬಾಡಿಗೆಯಲ್ಲಿದ್ದ. ನಾವು ಸಂಘಕ್ಕೆ ಸೇರಿಕೊಂಡಿದ್ವಿ. ಎರಡು ಸಾವಿರ ಕಮಿಷನ್ ಕೊಟ್ಟು ಸಾಲ ತಗೋತಿದ್ವಿ. ಇವನ ಮಾತು ಕೇಳದೆ ಇದ್ರೆ, ಏಯ್ ಪೂರ್ತಿ ಸಾಲ ಕಟ್ಟು ಅಂತಾ ಹಿಂಸೆ ಕೊಡ್ತಿದ್ದ. ಸಾಲ ಕೊಟ್ಟವರಿಗೆ ಇಲ್ಲಸಲ್ಲದನ್ನ ಹೇಳಿ ಅವರು ನಮ್ಮ ಮನೆ ಹತ್ರ ಗಲಾಟೆ ಮಾಡೋ ಹಾಗೆ ಮಾಡಿದ್ರು. ದುಡ್ಡು ದುಡ್ಡು ಅಂತೇಳಿ ಪ್ರಾಣ ತಿನ್ನೋರು. ಹತ್ತು ಸಾವಿರಕ್ಕೆ ಸಾವಿರ ರೂಪಾಯಿ ಬಡ್ಡಿ ತಗೋತಿದ್ದರು.

ಇದೇ ರೀತಿ ಅವನ ದೊಡ್ಡ ಮಗ, ಮಗಳು, ಮಹಡಿ ಮನೆ ಶಬಾನಾ, ಅವಳ ಮಗಳು ಎಲ್ಲರೂ ತೊಂದರೆ ಕೊಟ್ಟಿದ್ದಾರೆ. ಮೇಲಗಡೆ ಟ್ಯಾಂಕ್ ನಾವೇ ತೊಳಿಬೇಕಿತ್ತು, ಅವನು ತೊಳೀತಾ ಇರಲಿಲ್ಲ. ಅದಕ್ಕೂ ಜಗಳ ಆಗ್ತಿತ್ತು. ಖಲಂದರ್ ಬರೀ ಸೊಂಟದ ಕೆಳಗೇ ಮಾತಾಡೋನು. ಶಬಾನಾಗೂ ಖಲಂದರ್ ಗೂ ಸಂಬಂಧವಿತ್ತು. ನಾವು ಸಾಯೋಕೆ ಈ ಐದು ಜನರೇ ಕಾರಣ. ನಮ್ಮ ಮಕ್ಕಳು ಭಯ ಬಿದ್ದಿದ್ದಾರೆ, ನೀವು ಸತ್ರೆ ನಮ್ಮನ್ನ ಬಿಡ್ತಾರಾ ಅಂತಾ. ಅದಕ್ಕೆ ಅವರೂ ನಮ್ಮ ಜೊತೆ ಸಾಯ್ತಿದ್ದಾರೆ. ನಮ್ಮ ಬಗ್ಗೆ ಅಕ್ಕಪಕ್ಕದವರನ್ನ ಕೇಳಿ, ನಾವು ಯಾರ ತಂಟೆಗೂ ಹೋದೋರಲ್ಲ.

ಮೂವರು ಪೊಲೀಸ್ ಅಧಿಕಾರಿಗಳು ಇಲ್ಲೇ ಇದ್ದಾರೆ. ಅದರಲ್ಲಿ ಪಿ.ರವಿ, ಡಿ.ನಾಗರಾಜು ಬಾರ್ ಲೈನ್ ಕ್ವಾಟ್ರರ್ಸ್ ನಲ್ಲಿದ್ದಾರೆ. ಅವರ ಹೆಂಡ್ತಿ ಲತಾಕ್ಕ, ಆಮೇಲೆ ಆನಂದ್ ಅಂತಾ ಟ್ರಾಫಿಕ್ ನಲ್ಲಿದ್ದಾರೆ. ಆನಂದಣ್ಣ ಲಕ್ಕನಹಳ್ಳಿಯವ್ರು, ಬೇಕಿದ್ರೆ ಅವರತ್ರ ನಾವು ಹೇಗೆ ಅಂತಾ ಕೇಳಿ.

ಎಲ್ಲಾ ಪೊಲೀಸರಿಗೂ ಕೈ ಮುಗಿದು ಕೇಳ್ಕೊತಿನಿ. ನಮ್ಮ ದೇಹ ಪೋಸ್ಟ್ ಮಾರ್ಟಮ್ ಮಾಡಿಸ್ಬೇಡಿ. ಸತ್ತ ಮೇಲೆ ನಮಗೆ ನೋವು ಕೊಡಬೇಡಿ. ಖಲಂದರ್ ಗೆ ಸ್ವಲ್ಪ ಕೊಬ್ಬು ಕರಗಿಸಬೇಕು. ಅವನಿಗೆ ಸರಿಯಾದ ಶಿಕ್ಷೆ ಕೊಡಿ ಎಂದು ಮೂವರು ಪೊಲೀಸರ ಹೆಸರನ್ನು ಗರೀಬ್‌ ಸಾಬ್‌ ವೀಡಿಯೋನಲ್ಲಿ ಉಲ್ಲೇಖಿಸಿದ್ದಾರೆ.

ಐವರು ಪೊಲೀಸ್ ವಶಕ್ಕೆ

ಘಟನೆ ಸಂಬಂಧ ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ವೀಡಿಯೋನಲ್ಲಿ ಉಲ್ಲೇಖಿಸಿದ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತರು ನೆಲೆಸಿದ್ದ ಕೆಳಗಡೆ ಮನೆಯ ನಿವಾಸಿ ಖಲಂದರ್, ಖಲಂದರ್ ಮಗಳು ಸಾನಿಯಾ, ಹಿರಿಯ ಮಗ ಹಾಗೂ ಮನೆಯ ಮಹಡಿಯಲ್ಲಿ ನೆಲೆಸಿದ್ದ ಶಬಾನಾ ಸೇರಿ ಐವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News