ಬೆಂಗಳೂರು, ನ.25: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ವಿಧಿವಿಧಾನ ನೆರವೇರುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಸೇನಾ ಗೌರವ ಸಲ್ಲಿಸಲಾಗಿದ್ದು, ಸಾವಿರಾರು ಜನರು ಕಂಬನಿ ಮಿಡಿದಿದ್ದಾರೆ.
ನಂದನವನದ ಲೇಔಟ್ನಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಆರ್ಮಿ ವಾಹನದಲ್ಲಿ ಪ್ರಾಂಜಲ್ ಅವರ ಅಂತಿಮ ಯಾತ್ರೆ ಸಾಗಿದ್ದು, ದಾರಿಯುದ್ಧಕ್ಕೂ ಸಾರ್ವಜನಿಕರು ಜಯಘೋಷ ಮೊಳಗಿಸಿದ್ದಾರೆ. ವಾಹನದ ಮುಂದೆ ವಿದ್ಯಾರ್ಥಿಗಳ ಪರೇಡ್ ನಡೆದಿದ್ದು, ದಾರಿಯುದ್ದಕ್ಕೂ ಹೂ ಸುರಿದು ಸಾರ್ವಜನಿಕರು ಗೌರವ ಸಮರ್ಪಣೆ ಮಾಡಿದ್ದಾರೆ. ವಾಹನದ ಹಿಂದೆ ಓಡೋಡಿ ಬಂದ ಸಾರ್ವಜನಿಕರು ಪ್ರಾಂಜಲ್ ಅಮರ್ ರಹೇ ಅಮರ್ ರಹೇ ಘೋಷಣೆ ಕೂಗಿದ್ದಾರೆ.
ಸುಮಾರು 30 ಕಿ.ಮೀ. ದೂರ ಸಾಗಿ ಬಂದಿರುವ ಅಂತಿಮಯಾತ್ರೆಯಲ್ಲಿ ರಸ್ತೆಯುದ್ದಕ್ಕೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದ್ದಾರೆ. ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಕೂಡ್ಲು ಗೇಟ್ ಚಿತಾಗಾರದಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.